ಸೂಫಿ ಸಂತರು ಬೆಳಗಿದ ಭಾರತ

ಸೂಫಿ ಸಂತರು ಬೆಳಗಿದ ಭಾರತ ..
                ಎಪಿಎಂ ಶಮೀರ್ ಪೆರುವಾಜೆ, ಮರ್ಕಿನ್ಸ್  ಬೆಂಗಳೂರು
   
ಪುರಾತನ ಸಂಸ್ಕøತಿಗಳ ಬೀಡಾಗಿದ್ದ ಅನೇಕ ಧರ್ಮಗಳನ್ನು ಒಡಲಲ್ಲಿಟ್ಟುಕೊಂಡಿದ್ದ ಭರತ ಖಂಡಕ್ಕೆ ಕ್ರಿ.ಶ. 7ನೇ ಶತಮಾನದಲ್ಲಿ ಇಸ್ಲಾಂ ದಾಪುಗಾಲಿಡುತ್ತದೆ. ಇದರ ಹಿಂದಿರುವ ಅನೇಕ ಸಾತ್ವಿಕ ಸಂತ ಶಿರೋಮಣಿಗಳ     ತ್ಯಾಗ ಜೀವನವು ಈ ಮಣ್ಣಿನ ಐತಿಹ್ಯಗಳಲ್ಲಿ ದಾಖಲಾಗಿದೆ. ಭಾರತದಲ್ಲಿ ಇಸ್ಲಾಂ ಪ್ರಚಾರವಾಗಿದ್ದು ದೈವ ಹಾಗೂ ಪ್ರವಾದಿ ಪ್ರೇಮದಲ್ಲಿ ಮಗ್ನರಾಗಿದ್ದ ಸೂಫಿ ಶಿರೋಮಣಿಗಳ ಮೂಲಕವಾಗಿತ್ತು.  ಇಸ್ಲಾಮಿನ ನೈಜ ಸಾರವೇನೆಂದರಿಯಲು ಅವರ ಜೀವನಕ್ಕೊಮ್ಮೆ ಕಣ್ಣೋಡಿಸಿದರೆ ಸಾಕು ಅನ್ನುವ ಮಟ್ಟಿಗೆ ಪಾವನ ಜೀವನ ಶೈಲಿಯನ್ನು ಅವರು ಅಳವಡಿಸಿಕೊಂಡಿದ್ದರು. ಜನತೆಯ ಆಧ್ಯಾತ್ಮಿಕ ಹಾಗೂ ಮಾನಸಿಕವಾದ ಕ್ಷೇತ್ರ ಹಾಗೂ ಕಾರ್ಯಗಳಲ್ಲಿ ಶ್ರದ್ಧಾಪೂರ್ವಕ ಪಾಲ್ಗೊಂಡು ಜನರ ಆಶಾಕಿರಣಗಳಾಗಿ ಮಾರ್ಪಟ್ಟ ಆತ್ಮಜ್ಞಾನಿಗಳಾಗಿದ್ದ ಸೂಫಿ ಸಂತರು ಜನಮಾನಸದಲ್ಲಿ ಸದಾಕಾಲ ನೆಲೆ ನಿಲ್ಲುತ್ತಾರೆ.
ಭಾರತ ಉಪಖಂಡದಲ್ಲಿ ಇಸ್ಲಾಮಿನ ಪ್ರಚಾರ ಕಾರ್ಯದಲ್ಲಿ ಅರಬಿಗಳು ಮತ್ತು ಭಾರತೀಯ ಜ್ಞಾನಸುಧೆಗಳಾದ ಪ್ರಭೋದಕರ ಪಾತ್ರ ಹಿರಿದಾಗಿದೆ. ಇಸ್ಲಾಮಿನ ನೈಜ ಆದರ್ಶ ಹಾಗೂ ಚೈತನ್ಯಗಳನ್ನು ಹೀರಿದ ಅವರು ತಾವು ಹೋದ ಕಡೆಗಳಲ್ಲೆಲ್ಲಾ ಆದರ್ಶ ಧರ್ಮದ ದಿವ್ಯ ಸಂದೇಶಗಳ ಪ್ರಚಾರದಲ್ಲಿ ಸಕ್ರಿಯರಾದರು. ಭಾರತದ ಭೌಗೋಳಿಕವಾದ ರಚನೆಯು ಅರಬಿಗಳನ್ನು ತೀವ್ರವಾಗಿ ಆಕರ್ಷಿಸಿತ್ತು. ಯಮನ್‍ನ ಹಳರ್ ಮೌತ್, ತರೀಂ ಮುಂತಾದ ಪ್ರದೇಶಗಳಿಂದ ಭಾರತಕ್ಕೆ ವ್ಯಾಪಾರಕ್ಕೆ ಹಾಗೂ ಪ್ರಭೋದನೆಗೆ ಆಗಮಿಸಿದ ಯಮನಿಗಳ ಸಂಸ್ಕøತಿಯು ಪಶ್ಚಿಮ ಕರಾವಳಿ (ಮಲಬಾರ್ ತೀರ) ಯಲ್ಲಿ ಬೇರೂರತೊಡಗಿತು. ಯಮನ್‍ಗೆ ಅಭಿಮುಖವಾಗಿರುವ ಕೇರಳಕ್ಕೆ ಜಲಮಾರ್ಗವಾಗಿ ಬಂದ ಅರಬ್ಬರು ಇಲ್ಲಿ ಧರ್ಮ ಪ್ರಬೋಧನೆ ನಡೆಸಿದರು.
ಇನ್ನು ಭೂಮಿಮಾರ್ಗವಾಗಿಯೂ ಭಾರತಕ್ಕೆ ಇಸ್ಲಾಂ ಕಾಲಿಟ್ಟಿದ್ದನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದೆ. ಸಿಂಧ್ ಪ್ರಾಂತ್ಯವನ್ನು ವಶಪಡಿಸಿದ ಮುಸ್ಲಿಂ ರಾಜರು ಭೂಮಾರ್ಗದ ಮೂಲಕ ಇಸ್ಲಾಮನ್ನು ಭಾರತಕ್ಕೆ ಪರಿಚಯಿಸಿದರು. ಹಜ್ಜಾಜ್ ಬಿನ್ ಯೂಸುಫರ ಕಾಲದಲ್ಲಿ ಸಿಂಧನ್ನು ಅಧೀನಪಡಿಸಿದ ಮುಹಮ್ಮದ್ ಬಿನ್ ಖಾಸಿಮರು ಅಲ್ಲಿ ಮಸೀದಿಗಳಿಗೆ ಶಂಕುಸ್ಥಾಪನೆಗೈದು ಇಸ್ಲಾಮಿ ವಾತಾವರಣಕ್ಕೆ ಬುನಾದಿ ಹಾಕಿದರು. ಭರತದ ಪ್ರಪ್ರಥಮ ಇಸ್ಲಾಮಿ ಆಡಳಿತವು ಆ ಮೂಲಕ ಅಲ್ಲಿ ತಲೆಯೆತ್ತಿತು.
ಸುದೀರ್ಘವಾದ ಇಸ್ಲಾಮೀ ಪ್ರಭೋದನೆಯ ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ಪ್ರಬೋಧನೆಯಲ್ಲಿ ರಾಜರಿಗಿಂತಲೂ ಹೆಚ್ಚಾಗಿ ಅರಬಿಗಳೂ ಅರಬಿಯೇತರರೂ ಆದ ವ್ಯಕ್ತಿಗಳು ಪಾಲ್ಗೊಂಡಿದ್ದರು. ಅನೇಕ ಸೂಫಿಸಂತರು, ಪ್ರಖಾಂಡ ವಿದ್ವಾಂಸರು, ಸುಧಾರಕರು ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡರು. ಹಿಜಿರ 6ನೇ ಶತಮಾನದಿಂದ ಈಗಿನವರೆಗೂ ಪ್ರಭೋದನೆ ನಡೆಸಿದ ಸಂತರಲ್ಲಿ ಖಾಜಾ ಮುಈನುದ್ದೀನ್ ಚಿಶ್ತಿ (ಹಿ.538-633), ಶೈಖ್ ಖುತುಬುದ್ದೀನ್ ಬಖ್ತಿಯಾರ್ ಕಾಕೀ(ಹಿ. 583­­-633), ಶೈಖ್ ನಿಝಾಮುದ್ದೀನ್ ದೆಹ್ಲವೀ (ಹಿ.636-720), ಶೈಖ್ ಝೈನುದ್ದೀನ್ ಮಖ್ದೂಂ(ಹಿ.873-928), ಶೈಖ್ ಅಹ್ಮದ್ ಸರ್ ಹಿಂದ್(977-1037) ಮುಂತಾದವರು ಪ್ರಮುಖರಾಗಿದ್ದಾರೆ.
ಸುಲ್ತಾನುಲ್ ಹಿಂದ್ ಖಾಜಾ ಮುಈನುದ್ದೀನ್(ರ)
ಭಾರತೀಯ ಸೂಫಿ ಸಂತರ ಅನಭಿಷಿಕ್ತ ದೊರೆಯಾಗಿದ್ದರು ಖಾಜಾರವರು. ಪ್ರವಾದಿ ಪೌತ್ರರಾದ ಹುಸೈನ್(ರ) ರವರ ಕುಲೀನ ಪರಂಪರೆಯಲ್ಲಿ ಜನಿಸಿದ್ದ ಖಾಜಾರವರ ತಂದೆ ಘಿಯಾಸುದ್ದೀನ್(ರ) ಆಗಿದ್ದರು. ಇರಾನಿನ ಸಿಜಿಸ್ತಾನ್‍ನ ಸಂಜರ್ ಎಂಬಲ್ಲಿ ಹಿ.583ರಲ್ಲಿ ಅವರು ಜನಿಸುತ್ತಾರೆ. ಅವರ ಮೂಲ ಹೆಸರು ಹಸನ್ ಎಂದಾಗಿತ್ತು. ಅವರ ತಂದೆ ಘಿಯಾಸುದ್ದೀನರು ಉದಾರಮತಿಗಳಾಗಿದ್ದರು. ದಾನ ಧರ್ಮದಲ್ಲಿ ಅವರದ್ದು ಎತ್ತಿದ ಕೈಯಾಗಿತ್ತು. ಕುಟುಂಬದ ಜೀವನಕ್ಕೆ ಒಂದು ತೋಟವನ್ನು ಮಾತ್ರ ಬಿಟ್ಟು ಇಹಲೋಕ ತ್ಯಜಿಸಿದರು. ಮಹಾನ್ ವ್ಯಕ್ತಿಗಳನ್ನು ಹಾಗೂ ವಿದ್ವಾಂಸರನ್ನು ಅತಿಯಾಗಿ ಆದರಿಸುತ್ತಿದ್ದ ಖÁಜಾರವರು, ಒಂದು ದಿನ ತನ್ನ ತೋಟದ ಬಳಿ ನಡೆಯುತ್ತಿದ್ದ ಓರ್ವ ಸಂತರನ್ನು ಕಂಡರು. ಅವರನ್ನು ಕಂಡ ಕೂಡಲೇ ತನ್ನೆಲ್ಲಾ ಕಾರ್ಯಗಳನ್ನು ಬದಿಗಿರಿಸಿ ಅವರ ಬಳಿ ತೆರಳಿದರು. ಅಪಾರ ಆದರದಿಂದ ಅವರಿಗೆ ಪೀಠ ಕೊಟ್ಟು ಕುಳ್ಳಿರಿಸಿದರು. ತಿನ್ನಲು ಏನೂ ಇಲ್ಲದಿದ್ದರೂ ಅಳದುಳಿದ ದ್ರಾಕ್ಷೆ ನೀಡಿ ಸತ್ಕರಿಸಿದರು. ಖಾಜಾರವರ ಪ್ರೀತಿಪೂರ್ವಕ ವಿನಯಶೀಲ ಸತ್ಕಾರವನ್ನು ಕಂಡು ಆ ಸಂತರು ಸಂತುಷ್ಟರಾದರು. ತನ್ನ ಜೋಳಿಗೆಯಂದ ಒಂದು ಹಣ್ಣನ್ನು ಖಾಜಾರವರಿಗೆ ದಯಪಾಲಿಸಿದರು. ಅವರು ನೀಡಿದ ಹಣ್ಣು ತಿಂದಾಗ ಖಾಜಾರವರ ಅಂತರಾಳದಲ್ಲಿ ಅದೇನೊ ಬದಲಾವಣೆಗಳು ಉಂಟಾಗತೊಡಗಿದವು. ಸಂಪತ್ತಿನ ಮೇಲಿನ ವ್ಯಾಮೋಹವು ಇಲ್ಲವಾಯಿತು. ಅಲ್ಲಾಹನ ಹಾಗೂ ಮರಣಾ ನಂತರ ಜೀವನದ ಕುರಿತ ಚಿಂತೆ ಇಮ್ಮಡಿಯಾಯಿತು. ಎಲ್ಲಾ ಸೊತ್ತುಗಳನ್ನು ತ್ಯಜಿಸಿ ಓರ್ವ ಪರಿತ್ಯಾಗಿಯಾಗಿ ಅವರು ಮಾರ್ಪಟ್ಟರು. ಜ್ಞಾನಾರ್ಜನೆಗಾಗಿ ಅವರ ಹೃದಯವು ತುಡಿಯತೊಡಗಿತು. 
ವಿದ್ಯಾರ್ಜನೆಯು ದೈವಸಂಪ್ರೀತಿಗೆ ಇರುವ ಮೆಟ್ಟಿಲು ಎಂಬುದನ್ನರಿತು ಅವರು ಜ್ಞಾನಸುಧೆಗಳಾದ ವಿದ್ವಾಂಸರನ್ನು ಹುಡುಕತೊಡಗಿದರು. ಸಮರ್ಖಂದ್, ಇರಾಖ್ ಮುಂತಾದ ಸ್ಥಳಗಳನ್ನು ಸುತ್ತಿ ಕೊನೆಗೆ ಹಾರೂನ್ ಎಂಬ ಪಟ್ಟಣ ತಲುಪಿದರು. ಅಲ್ಲಿನ ಜನರ ಆಶಾಕೇಂದ್ರವಾಗಿದ್ದ ಚಿಶ್ತಿ ತರೀಖತ್‍ನ ಶೈಖ್ ಆಗಿದ್ದ ಉಸ್ಮಾನ್ ಹಾರೂನಿ ಸಮಕ್ಷಮದಲ್ಲಿ ಆಧ್ಯಾತ್ಮಿಕ ಉನ್ನತಿ ಪಡೆಯಲು ಬಯಸಿದರು. ಹಾರೂನಿಯವರ ಬಳಿ ವಿದ್ಯಾರ್ಜನೆ ಮಾಡುತ್ತಾ ಅವರ ಚಿಶ್ತಿಯ್ಯ ಎಂಬ ಆತ್ಮಜ್ಞಾನಿಗಳ ಸಂಗಮದ ಸದಸ್ಯರೂ ಆದರು. ನಿರಂತರ ಆರಾಧನೆ ಮೂಲಕ ಆಧ್ಯಾತ್ಮಿಕ ಪದೋನ್ನತಿ ಪಡೆದರು. ಪಾದಸೇವೆಯ ಮೂಲಕ ಗುರುವಿನ ಗಮನ ಸೆಳೆದ ಖಾಜಾರವರನ್ನು ಹಾರೂನಿಯವರು ಚಿಶ್ತಿಯವರು ತರೀಖತ್‍ನ ಪ್ರತಿನಿಧಿಯಾಗಿ ನೇಮಿಸಿದರು. ನಂತರ ಪ್ರಖಾಂಡ ಆತ್ಮಜ್ಞಾನಿಗಳನ್ನು ಅರಸುತ್ತಾ ಪ್ರಯಾಣವನ್ನಾರಂಭಿಸಿದರು. ಆತ್ಮಜ್ಞಾನಿಗಳ ಸಂಗಮ ಭೂಮಿಯಾದ ಬಾಗ್ದಾದ್‍ಗೆ ತೆರಳಿ ಶೈಖ್ ಜೀಲಾನಿಯವರನ್ನು ಕಂಡು ಆಶೀರ್ವಾದ ಪಡೆದರು. 5 ತಿಂಗಳುUಳ ಕಾಲ ಅವರ ಬಳಿ ವಾಸವಿದ್ದರು. ಬಳಿಕ ಬಳಿಕ ಹಮದಾನ್, ತಿಬ್ರೀಝ್, ಇಸ್ಫಹಾನ್ ಮುಂತಾದ ಪುಣ್ಯಭೂಮಿಯಲ್ಲಿ ಪಾವನ ವ್ಯಕ್ತಿಗಳನ್ನು ಕಂಡು ಆಶೀರ್ವಾದಗಳನ್ನು ಪಡೆದು ಪ್ರಯಾಣ ಮುಂದುವರೆಸಿದರು. ಕೊನೆಗೆ ಲೋಕಾನುಗ್ರಹಿ ಪ್ರವಾದಿ (ಸ)ರವರ ಸನ್ನಿಧಿಗೆ ತೆರಳಿ, ಹಿಂದೂಸ್ಥಾನದ ಅಜ್ಮೀರ್‍ಗೆ ತೆರಳಬೇಕೆಂಬ ಆಜ್ಞೆಯನ್ನು ಮನ್ನಿಸಿ 40 ಫಕೀರರ ತಂಡದೊಂದಿಗೆ ಭಾರತಕ್ಕೆ ಬರುತ್ತಾರೆ.
ತಮ್ಮ 40 ಶಿಷ್ಯರೊಂದಿಗೆ ಭರತಕ್ಕೆ ಕಾಲಿಟ್ಟ ಖಾಜಾರವರು, ಪ್ರಯಾಣದ ಮಧ್ಯೆ ಹಲವಾರು ಸ್ಥಳಗಳನ್ನು ಪುನೀತಗೊಳಿಸಿದರು. ಭಾರತದ ದೆಹಲಿಯಲ್ಲಿ ಕೆಲಕಾಲ ಅವರು ತಂಗುತ್ತಾರೆ. ಅನೇಕ ಜನರು ಅವರನ್ನು ನೋಡಿ ಇಸ್ಲಾಮಿನ ಸದಸ್ಯರಾದರು. ತನ್ನ ಶಿಷ್ಯ ಬಖ್ತಿಯಾರ್ ಕಾಕೀಯವರಿಗೆ ದೆಹಲಿಯ ಉಸ್ತುವಾರಿ ಹೆಗಲೇರಿಸಿ ಅಜ್ಮೀರ್‍ಗೆ ತೆರಳುತ್ತಾರೆ. ಅಂದು ರಜಪೂತ ವಂಶದ ಪೃಥ್ವಿರಾಜ ಚೌಹಾನ್ ಎಂಬ ಮದವೇರಿದ ರಾಜನು ಆಳುತ್ತಿದ್ದನು. ತಮ್ಮ ಶಿಷ್ಯರೊಂದಿಗೆ ಖಾಜಾರವರು ಒಂದೆಡೆ ಕುಳಿತರು. ಸಂಜೆಯಾಗುವಾಗ ಒಂಟೆಗಳೊಂದಿಗೆ ಅವುಗಳ ಯಜಮಾನನೂ ಬಂದನು. “ಇದು ಒಂಟೆಗಳು ತಂಗುವ ಸ್ಥಳ” ಎಂದು ಗದರುತ್ತಾ ಖಾಜಾರವರನ್ನು ಎಬ್ಬಿಸಲು ಯತ್ನಿಸಿದನು. ಆತನ ಆಕ್ರೋಶವು ಹೆಚ್ಚಾದಾಗ “ಒಂಟೆಗಳು ಅಲ್ಲೇ ಇರಲಿ” ಎಂದು ಖಾಜಾರವರು ತಮ್ಮ ಶಿಷ್ಯರೊಂದಿಗೆ ಅನಾಸಾಗರ್ ಬಳಿ ತೆರಳಿದರು. ಮಾರನೇ ದಿನ ಒಂಟೆಗಳಿಗೆ ಎದ್ದೇಳಲಾಗದಿದ್ದನ್ನು ಕಂಡ ಯಜಮಾನನು ತನ್ನ ತಪ್ಪಿ ಅರಿವಾಗಿ ಖಾಜಾರ ಬಳಿ ಕ್ಷಮೆ ಕೋರಿದನು. ಬಳಿಕ ಒಂಟೆಗಳಿಗೆ ಎದ್ದೇಳಲು ಸಾಧ್ಯವಾಯಿತು!. ಇದು ರಾಜನ ಆಸ್ಥಾನದಲ್ಲೂ ಪ್ರತಿಧ್ವನಿಸಿದಾಗ ಆತನು ಖಾಜಾರನ್ನೂ ಅಕ್ರಮಿಸಲು ಒಬ್ಬೊಬ್ಬರನ್ನೇ ಕಳುಹಿಸತೊಡಗಿದನು. ಇಂದ್ರಜಾಲದಲ್ಲಿ ಪರಾಕಾಷ್ಟೆಗೇರಿದ ಇಬ್ಬರು ಖಾಜಾರ ಮುಂದೆ ಮಂಡಿಯೂರಿದರು. ಹೀಗೆ ಹಲವ ಆರು ಪವಾಡಗಳು ಅವರಿಂದ ಸಿದ್ಧಿಸಿದವು. ಅವರ ಬಳಿ ತೆರಳಿ ಮುಸ್ಲಿಮರಾಗುವ ಜನರ ಸಂಖ್ಯೆ ದಿನೇ ದಿನೇ ವರ್ಧಿಸತೊಡಗಿತು.
ಗರೀಬ್ ನವಾಝ್, ಆಶಿಕುರ್ರಸೂಲ್ ಖಾಜಾರವರು ಭಾರತದಲ್ಲಿ ಖಡ್ಗ ಪ್ರಯೋಗಿಸಿ ಧರ್ಮಪ್ರಚಾರ ಮಾಡಲಿಲ್ಲ. ಅವರ ವಿನಯಶೀಲತೆ, ದಯೆ, ಕರುಣೆಗಳುಇತರರನ್ನು ಇಸ್ಲಾಮಿಗೆ ಆಕರ್ಷಿಸಿದವು. ಹಲವಾರು ಪವಾಡಗಳನ್ನು (ಅನಾಸಾಗರ್ ಕೆರೆ ಬತ್ತಿ ಹೋಗಿದ್ದು ಅವುದಳಲ್ಲೊಂದು) ಕಂಡ ಜನರು ಸಾಲುಸಾಲಾಗಿ ಇಸ್ಲಾಮಿನ ಬಾಗಿಲು ಬಡಿಯತೊಡಗಿದರು. ಅವರ ಸಹಿಷ್ಣುತೆ ಹಾಗೂ ಶಾಂತಿಮಂತ್ರಗಳು ಜನರನ್ನು ಇಸ್ಲಾಮಿಗೆ ಆಕರ್ಷಿಸಿತು. ಕರುಣೆಯ ಸಾಗರವಾಗುವ ಮೂಲಕ ಅವರು ಭಾರತೀಯರ ಜನಮಾನಸದಲ್ಲಿ ಸುಲ್ತಾನರಾಗಿ ವಿರಾಜಮಾನರಾದರು. ಸುಲ್ತಾನುಲ್ ಹಿಂದ್ ಮತ್ತು ಗರಿಬ್ ನಮಾಝ್ ಎಂಬ ಬಿರುದುಗಳನ್ನು ಭಾರತೀಯರು ಅವರಿಗೆ ನೀಡಿದರು. ಇಂದಿಗೂ ಎಲ್ಲಾ ಧರ್ಮೀಯರ ಶ್ರದ್ಧಾಕೇಂದ್ರವಾಗಿರುವ ಖಾಜಾರವರು ಹಿ, 633 ರಜಬ್ 6ರಂದು ಇಹಲೋಕವನ್ನು ತ್ಯಜಿಸುತ್ತಾರೆ.
ಖಾಜಾ ಖುತ್ಬುದ್ದೀನ್ ಬಖ್ತಿಯಾರ್ ಕಾಕೀ (ರ)
ಖಾಜಾ ಬಖ್ತಿಯಾರ್ ಕಾಕೀರವರ ನಾಮ ಭಾರತದ ಇಸ್ಲಾಮೀ ಚರಿತ್ರೆಯಲ್ಲಿ ಮರೆಯಲಾಗದ ನಾಮವಾಗಿದೆ. ಅವರು ಖಾಜಾ ಮುಈನುದ್ದೀನರ ಶಿಷ್ಯರಲ್ಲಿ ಪ್ರಮುಖರಾಗಿದ್ದರು. ಅವರ ನಿಜ ನಮ ಬಖ್ತಿಯಾರ್ ಎಂದೂ, ಖುತ್ಬುದ್ದೀನ್ ಅವರ ಬಿರುದಾಗಿತ್ತು. ಕಾಕೀ ಎಂಬುದು ಅದ್ಭುತ ಸಿದ್ಧಿಗಳ ಕಾರಣ ಲಭಿಸಿದ ನಾಮವಾಗಿತ್ತು. ಅವರ ತಂದೆ ಖಾಜಾರ ಸಣ್ಣ ಪ್ರಾಯದಲ್ಲೇ ತೀರಿ ಹೋಗಿದ್ದರು. ತಾಯಿಯ ಆರೈಕೆ ಹಾಗೂ ಶಿಕ್ಷಣದಲ್ಲಿ ಅವರು ಪ್ರಬುದ್ಧರಾದರು.
ಖಾಜಾ ಮುಈನುದ್ದೀನರ ಪ್ರಧಾನ ಶಿಷ್ಯರಾಗಿದ್ದ ಕಾಕೀಯವರಿಗೆ ಹಲವಾರು ಉಪದೇಶ ನೀಡಿದ್ದರು. “ತಸವ್ವುಫ್‍ನ ಹಾದಿಯಿಂದ ಹಿಂತಿರುಗಿ ಹೋಗದಿರು” ಖಾಜಾರವರ ಉಪದೇಶವನ್ನು ಶಿರಸಾ ಪಾಲಿಸಿದ್ದರು. ಭಾರತದ ದೆಹಲಿಯ ಉಸ್ತುವಾರಿಯನ್ನು ಖಾಜಾರವರು ಬಖ್ತಿಯಾರರಿಗೆ ವಹಿಸಿ ಅವರನ್ನು ಹರಸಿದ್ದರು. ಗುರುವಿ ಆದೇಶವನ್ನು ಪಾಲಿಸಿದ ಬಖ್ತಿಯಾರರು ದೆಹಲಿಯಲ್ಲಿ ತಮ್ಮ ಪ್ರಭೋದನೆ ನಡೆಸಿದ್ದರು. ಅಂದು ದೆಹಲಿಯನ್ನು ಗುಲಾಮಿ ಸಂತತಿಯ ಸುಲ್ತಾನ್ ಇಲ್ತುಮಿಷ್ ಆಳುತ್ತಿದ್ದರು. ಅಪ್ರತಿಮ ಪ್ರವಾದಿ ಪ್ರೇಮಿಯಾಗಿದ್ದ ಬಖ್ತಿಯಾರರು ಸ್ವಲಾತ್ (ದರೂದ್ ಶರೀಫ್)ನ್ನು ರೂಢಿಯಾಗಿಸಿದ್ದರು. ಮದುವೆ ಕಾರಣ 3 ದಿನ ಸ್ವಲಾತ್‍ಗೆ ಮೊಟಕಾಗಿದ್ದರಿಂದ ಪತ್ನಿಗೆ ವಿಚ್ಛೇದನೆ ನೀಡಿ ಒಬ್ಬಂಟಿಯಾಗಿ ಕಳೆದರು. ಆರಾಧನೆಯಲ್ಲಿ ಸದಾಕಾಲ ಅವರು ಮಗ್ನರಾಗಿದ್ದರು. ಅಲ್ಲಾಹನ ಭಯ ಹಾಗೂ ಪ್ರವಾದಿ ಪ್ರೇಮದಲ್ಲೇ ತಲ್ಲೀನರಾಗಿರುತ್ತಿದ್ದರು. ಬಾಬಾ ಫರೀದ್‍ರಂತಹ ಸಂತರು ಅವರ ಶಿಷ್ಯರಾಗಿದ್ದರು.
ಹಝ್ರತ್ ನಿಝಾಮುದ್ದೀನ್ ಔಲಿಯಾ (ರ)
ಭಾರತೀಯ ಸೂಫಿ ಚರಿತ್ರೆಯಲ್ಲಿ ಹಝ್ರತ್ ನಿಝಾಮುದ್ದೀನರ ಹೆಸರು ಅಜರಾಮರ. ದೆಹಲಿಯಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ನಿಝಾಮುದ್ದೀನರ ಹೆಸರಿನಲ್ಲಿ ರೈಲ್ವೆ ನಿಲ್ದಾಣ ಹಾಗೂ ಎಕ್ಸ್‍ಪ್ರೆಸ್ ರೈಲುಗಳು ಚಾಲ್ತಿಯಲ್ಲಿವೆ.ಭಾರತೀಯರ ಜನಮನಸ್ಸಿನಲ್ಲಿ ಎಂದೆಂದಿಗೂ ಅವರು ಉಳಿಯಲು ಕಾರಣ, ಅವರ ಸಹಿಷ್ಣುತೆ ಹಾಗೂ ವಿನಮ್ರತೆಗಳಾಗಿತ್ತು. ಅವರು ಶಾಂತಿಯ ಮೂರ್ತರೂಪವಾಗಿದ್ದರು. ಉತ್ತರ ಪ್ರದೇಶದ ಬದಾಯೂನ್‍ನಲ್ಲಿ ಪ್ರವಾದಿ ಪರಂಪರೆಯ ಕೊಂಡಿಯಾಗಿ ಜನಿಸಿದ ಶೈಖ್‍ರವರ ಮನೆಯಲ್ಲಿ ಅತೀವವಾದ ಬಡತನವಿತ್ತು. ಒಪ್ಪೊತ್ತಿನ ಊಟಕ್ಕೂ ಗತಿಯಿರಲಿಲ್ಲ. ಒಲೆಯಲ್ಲಿ ಬೆಂಕಿ ಕಾಣದ ಹಲವಾರು ದಿನಗಳು ಅವರ ದಿನಚರಿಯ ಭಾಗವಾಗಿತ್ತು. ಆ ಸಂದರ್ಭದಲ್ಲಿ ಅವರ ತಾಯಿಯವರೆ  “ಈ ಲೋಕ ನಶ್ವರ. ನಮಗೆ ಪರಲೋಕದಲ್ಲಿ ಜೀವನವಿದೆ” ಎಂಬ ಮಾತುಗಳು ತುಂಬಾ ಮನೋಸ್ಥೈರ್ಯವನ್ನು ನೀಡುತ್ತಿತ್ತು. ಅವರು ಬಾಬಾ ಫರೀದ್‍ರವರ ಮಾರ್ಗದರ್ಶನದಲ್ಲಿ ಬೆಳೆದರು. ಜನಾನುರಾಗಿಯಾಗಿ ಬಾಳಿದ್ದ ಹಝ್ರತ್‍ರವರು ಇಂದಿಗೂ ಎಲ್ಲಾ ಧರ್ಮೀಯರಿಗೂ ಆಶಾಕಿರಣವಾಗಿದ್ದಾರೆ.
ಶೈಖ್ ಅಹ್ಮದ್ ಸರ್‍ಹಿಂದೀ (ರ)
ಅಲ್ ಮುಜದ್ದಿದೇ ಅಲ್ಫಸ್ಸಾನೀ (2ನೆ ಸಹಸ್ರಮಾನದ ನವಜೀವನಧಾತಾ) ಎಂದೇ ಖ್ಯಾತರಾಗಿದ್ದ ಶೈಖ್ ಅಹ್ಮದ್ ಸರ್ಹಿಂದೀಯವರು 2ನೇ ಖಲೀಫ ಉಮರ್ ಫಾರೂಖ್ (ರ)ರವರ ಪರಂಪರೆಗೆ ಸೇರುತ್ತಾರೆ. ಪಂಜಾಬ್ ಪ್ರಾಂತ್ಯದ ಸರ್‍ಹಿಂದ್ ಎಂಬ ಸ್ಥಳದಲ್ಲಿ ಅವರು ಹಿ.977 ರಲ್ಲಿ ಜನಿಸುತ್ತಾರೆ. ಅವರ ತಂದೆ ಶೈಖ್ ಅಬ್ದುಲ್ ಅಹದ್ ಬಿನ್ ಝೈನುಲ್ ಆಬಿದೀ (ರ)ರವರಿಂದ ಜ್ಞಾನಾರ್ಜನೆಗೈಯ್ಯುತ್ತಾರೆ. ಧಾರ್ಮಿಕ ವಿದ್ಯೆಯಲ್ಲಿ ಪಾರಂಗತರಾಗಿದ್ದ ಅವರ ಕುಶಾಗ್ರಮತಿಯನ್ನು ಕಂಡು ಹಿರಿಯ ವಿದ್ವಾಂಸರೇ ಬೆಕ್ಕಸ ಬೆರಗಾಗಿದ್ದರು. ನಕ್ಷಬಂದೀ ತರೀಖತ್‍ನ ಶೈಖಾಗಿದ್ದ ಬಾಬಾ ಬಾಖೀ ಬಿಲ್ಲ (ರ)ರವರನ್ನು ಮುಖತಃ ಭೇಟಿಯಾಗಿದ್ದು ಸರ್‍ಹಿಂದಿಯವರ ಜೀವನದಲ್ಲಿ ತಿರುವುಗಳಿಗೆ ಕಾರಣವಾಯಿತು. ಅವರ ಬಳಿ ನಕ್ಷಬಂದೀ ತರೀಖತ್‍ನ ದೀಕ್ಷೆ ಪಡೆದು ಆಧ್ಯಾತ್ಮಿಕವಾಗಿ ಎತ್ತರಕ್ಕೇರಿದರು. ಸರ್‍ಹಿಂದೀಯವರ ಆಧ್ಯಾತ್ಮಿಕ ಚಿಂತನೆಗಳು ಹಾಗೂ ತುಡಿತಗಳು ಖಾಜಾರವರನ್ನು ಬಹುವಾಗಿ ಆಕರ್ಷಿಸಿತು. ಆದ್ದರಿಂದಲೇ ನಕ್ಷಬಂದೀ ತರೀಕತ್‍ನ ಪ್ರತಿನಿಧಿ (ಖಲೀಫ) ಪಟ್ಟವು ಅವರಿಗೆ ಒಲಿದು ಬಂತು.
ಖಾಜಾ ಬಾಕೀ ಬಿಲ್ಲರವರ ನಿಧನಾನಂತರ ಸರ್ಹಿಂದೀಯವರು ನಕ್ಷಬಂದೀ ತರೀಖತ್‍ನ ಪ್ರಧಾನಿಯಾದರು. ಅವರು ಜನರ ಆಶೋತ್ತರಗಳಿಗೆ ಸ್ಪಂದಿಸತೊಡಗಿದರು. ಅಧಾರ್ಮಿಕತೆಯನ್ನು ತೊಡೆದು ಹಾಕಲು ನಿರಂತರ ಶ್ರಮಿಸಿದರು. ಧರ್ಮವಿರೋಧಿ ಕಾರ್ಯಗಳನ್ನು ಮುಖತಃ ಖಂಡಿಸತೊಡಗಿದರು. ಅಕ್ಬರ್ ಬಾದಶಹ ಸ್ಥಾಪಿಸಿದ ದೀನ್-ಎ-ಇಲಾಹೀ ಎಂಬ ಧರ್ಮವನ್ನು ನಖಶಿಖಾಂತ ಖಂಡಿಸಿದರು. ಬಾದಶಹನ ವಿರುದ್ಧ ಸೊಲ್ಲೆತ್ತಲು ಅಂದು ಯಾರಿಗೂ ಧೈರ್ಯವಿರದಿದ್ದರೂ ಸರ್‍ಹಿಂದಯವರು ಆತನ ಅಧರ್ಮೀಯ ಕ್ರಮಗಳನ್ನು ಖಂಡಿಸತೊಡಗಿದರು. ಕಷ್ಟ ಕಾರ್ಪಣ್ಯಗಳು ಸರಮಾಲೆಗಳಾಗಿ ಎದುರಾದರೂ ಎದೆಗುಂದದೆ ಎದೆಗಾರಿಕೆಯಿಂದ ಧರ್ಮರಕ್ಷಣೆಗೆ ಜೋತು ಬಿದ್ದರು. ಅವರ ಕಠಿಣ ಶ್ರಮದ ಕಾರಣದಿಂದ ಅಂದಿನ ಪಂಜಾಬ್ ಪ್ರಾಂತ್ಯ(ಇಂದಿನ ಭಾರತ ಹಾಗು ಪಾಕ್‍ನ ಪಂಜಾಬ್ ಪ್ರಾಂತ್ಯ)ದಲ್ಲಿ ಇಸ್ಲಾಂ ವೈಭವವನ್ನು ಗಳಿಸಿಕೊಂಡಿತು. ಇಸ್ಲಾಮಿಗೆ ಚೈತನ್ಯವನ್ನು ನೀಡಿದ ಕಾರಣ ಅವರನ್ನು 2ನೇ ಸಹಸ್ರಮಾನದ ಮುಜದ್ದಿದ್ (ಮುಜದ್ದಿದೇ ಅಲ್‍ಫಸ್ಸಾನಿ) ಎಂದು ಸಮೂಹವು ಕರೆಯತೊಡಗಿತು, ಹಿ. 1034ರಲ್ಲಿ ಆ ಮಹಾತ್ಮರು ಇಹಲೋಕ ತ್ಯಜಿಸುತ್ತಾರೆ.
ಇನ್ನು ಝೈನುದ್ದೀನ್ ಮಕ್ದೂಂ. ಏರ್ವಾಡಿ ಇಬ್ರಾಹೀ ಬಾದ್‍ಶಾ, ಮೀರಾನ್ ಶಾಹುಲ್ ಹಮೀದ್ ನಾಗೂರು, ಬಾಬಾ ಫರೀದ್, ಖಾಜಾಬಂದೇ ನವಾಝ್ ಮುಂತಾದ ಮಹನೀಯರು ಸೂಫಿ ಪರಂಪರೆಯ ಪ್ರಮುಖರಾಗಿದ್ದಾರೆ. ಸಹನಶೀಲರೂ, ಸಹಿಷ್ಣುಗಳೂ, ಶಾಂತಚಿತ್ತರೂ ಆಗಿದ್ದ ಸೂಫಿ ಸಂತರು ಭಾರತದಲ್ಲಿ ಶಾಂತ ವಾತಾವರಣವನ್ನು ನಿರ್ಮಿಸಿದ್ದಾರೆ. ಮಾದರಿಯೋಗ್ಯ ರಾಷ್ಟ್ರವಾಗೀ ಭಾರತವನ್ನು ಅವರು ಮಾರ್ಪಾಟು ಮಾಡಿದ್ದಾರೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವನ್ನು ಆಧ್ಯಾತ್ಮಿಕ ನಾಯಕರಾದ ಸೂಫಿ ಸಂತರು ಬೆಳಗಿದ್ದಾರೆ.

Comments