ದಮನಿಸಲ್ಪಡುತ್ತಿರುವ ಭಾವನೆ ಮತು ವಿಚಾರಗಳು ಎಪಿಎಂ ಶಮೀರ್ ಪೆರುವಾಜೆ

ದಮನಿಸಲ್ಪಡುತ್ತಿರುವ ಭಾವನೆ ಮತು ವಿಚಾರಗಳು
                        ಎಪಿಎಂ ಶಮೀರ್ ಪೆರುವಾಜೆ



ಬಹಳ ಹಿಂದೆ ರಾಜಪ್ರಭುತ್ವ ಹಾಗೂ ನಿರಂಕುಶ ಪ್ರಭುತ್ವಗಳ ಚಾಳಿಯಾಗಿದ್ದ ಭಾವನೆ ಮತ್ತು ವಿಚಾರಗಳ ಮೇಲಿನ ನಿಯಂತ್ರಣವು ಇದೀಗ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲೂ ಕಂಡುಬರತೊಡಗಿದೆ. ಅಧಿಕಾರಿ ವರ್ಗಗಳು ತಮ್ಮ ಅಸ್ತಿತ್ವಗಳನ್ನುಳಿಸಿಕೊಳ್ಳಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸಗಳಲ್ಲಿ ಮಗ್ನವಾಗಿದೆ. ತಮ್ಮ ಸಿದ್ಧಾಂತವನ್ನು ವಿರೋಧಿಸುವ , ತಮಗಾಗದವರನ್ನು ಪ್ರಶಂಸಿಸುವ, ತಮ್ಮ ಕುಟಿಲತೆಗಳನ್ನು ಪ್ರಶ್ನಿಸುವ, ಜನಸಾಮಾನ್ಯರ ಪರ ದನಿ ಎತ್ತುವ ಹಾಗೂ ಕಾರ್ಪೊರೇಟ್ ಕುಳಗಳ ವಿರುದ್ಧ ಕೆಂಡಕಾರುವ  ಜನಸ್ನೇಹಿ ಮಾಧ್ಯಮಗಳು, ಪತ್ರಕರ್ತರು, ಹಾಗೂ ವಿಚಾರವಾದಿಗಳನ್ನು ಸರಕಾರಗಳು ಪರಿಣಾಮಕಾರಿಯಾಗಿ ದಮನ ಮಾಡಲೆತ್ನಿಸುತ್ತಿದೆ. ತನ್ನೊಳಗಿನ ಲೇಖಕನ ಸಾವನ್ನು ಘೋಷಿಸಿದ ಪೆರುಮಾಳ್ ಮುರುಗನ್, ಮತೀಯವಾದಿಗಳಿಂದ ಕೊಲೆಮಾಡಲ್ಪಟ್ಟ ಎಡಪಂಥೀಯ ಬರಹಗಾರ ಗೋವಿಂದ ಪಾನ್ಸರೆ, ವಿಚಾರವಾದಿ ಡಾ. ನರೇಂದ್ರ ಧಾಭೋಲ್ಕರ್ ಮತ್ತು ಸಂಶೋಧಕ  ಪ್ರೊ. ಕಲ್ಬುರ್ಗಿಯವರು ಭಾವನೆ ಮತ್ತು ವಚಾರಗಳ ಮೇಲಿನ ನಿಯಂತ್ರಣದ ಭಾಗವಾಗಿಯೇ ದಮನ ಮಾಡಲ್ಪಟ್ಟಿದ್ದರು. ಇಂತಹ ವಿಚಾರವಾದಿಗಳನ್ನು ಪ್ರಭುತ್ವದ ಕೃಪಾಪೋಷಿತ ಹಂತಕರೇ ಫ್ಲ್ಯಾಟ್ ಮಾಡಿದ್ದರು, ಹಾಗು ಅವರನ್ನು ಪ್ರಭುತ್ವವು ರಕಗಷಿಸುತ್ತಿದೆ ಎಂಬುದು ಇದೀಗ ಅರಿವಾಗತೊಡಗಿದೆ.
            ವಿಚಾರ ಮತ್ತು ಭಾವನೆಗಳ ಮೇಲಿನ ನಿಯಂತ್ರಣವು ಈ ಕೆಲಗಿನ ಕೆಲ ಉದ್ದೇಶಗಳಿಗಾಗಿರಬಹುದು. ರಾಜಪ್ರಭುತ್ವ ಅಥವಾ ನಿರಂಕುಶ ಪ್ರಭುತ್ವ ಅಥವಾ ಚುನಾಯಿತ ಸರಕಾರಗಳ ಗೌರವ ಮತ್ತು ಪ್ರತಿಷ್ಠೆಯನ್ನು ಕಾಪಾಡುವುದು, ರಾಷ್ಟ್ರೀಯ ಭದ್ರತೆಗಳನ್ನು ಕಾಯ್ದುಕೊಳ್ಳುವುದು, ಜಾತಿ,ವರ್ಗ, ಮತ್ತು ಧರ್ಮಗಳನಡುವಿನ ಶಾಂತಿಗೆ ಭಂಗ ಬರದಂತೆ ನೋಡಿಕೊಳ್ಳುವುದು ಹೀಗೆ ಹಲವಾರು ಉದ್ದೇಶಗಳಿಗಾಗಿ ವಿಚಾರ ಮತ್ತು ಭಾವನೆಗಳನ್ನು ನಿಯಂತ್ರಿಸಲಾಗುತ್ತದೆ. ಜಾತಿ,ವರ್ಗ, ಮತ್ತು ಧರ್ಮಗಳನಡುವಿನ ಶಾಂತಿಗೆ ಭಂಗ ಬರದಂತೆ ನೋಡಿಕೊಳ್ಳಲು ಹಾಗೂ ರಾಷ್ಟ್ರೀಯ ಭದ್ರತೆಗಳನ್ನು ಕಾಯ್ದುಕೊಳ್ಳಲು ವಿಚಾರ ಮತ್ತು ಭಾವನೆಗಳ ನಿಯಂತ್ರಣವನ್ನು ಒಪ್ಪಿಕೊಳ್ಳೋಣ. ಆದರೆ ಸರ್ಕಾರಗಳ ಪ್ರತಿಷ್ಟೆಯನ್ನು ಕಾಪಾಡಲು ವಿಚಾರ ಮತ್ತು ಭಾವನೆಗಳನ್ನು ನಿಯಂತ್ರಿಸುವುದು ಎಷ್ಟು ಸರಿ? ಸರ್ಕಾರವನ್ನು ಒಪ್ಪಿಕೊಂಡವರನ್ನು ದೇಶಪ್ರೇಮಿಗಳೆಂದೂ ಒಪ್ಪಿಕೊಳ್ಳದವರನ್ನು ದೇಶದ್ರೋಹಿಗಳೆಂದು ಕರೆಯುವುದು ಎಷ್ಟು ಸರಿ? ತಮ್ಮನ್ನು ಪ್ರಶ್ನಿಸುವ ಸಮೂಹ ಮಾಧ್ಯಮಗಳಿಗೆ ದಿಗ್ಬಂಧನ ವಿಧಿಸುವುದು ಎಷ್ಟು ಸರಿ?
        ಭಾವನೆ ಮತ್ತು ವಿಚಾರಗಳ ಮೇಲಿನ ಹತೋಟಿ ಇಂದು ನಿನ್ನೆ  ಉಂಟಾದ ಸಂಗತಿಗಳಲ್ಲ. ಅದಕ್ಕೆ ಹಲವಾರು ದಶಕ ಶತಕಗಳ ಇತಿಹಾಸವಿದೆ. ಜನರಿಂದ ಸಂಗ್ರಹಿಸಲ್ಪಡುವ ತೆರಿಗೆಯ ಹಣದಿಂದ ಆಡಂಭರ ಹಾಗೂ ವಿಲಾಸೀ ಜೀವನ ನಡೆಸುತ್ತಿದ್ದ ರಾಜ ಪ್ರಭುಗಳು ಹಾಗೂ ನಿರಂಕುಶ ಪ್ರಭುಗಳು ತಮ್ಮ ರಾಜ್ಯ-ಸಾಮ್ರಾಜ್ಯಗಳ ಜನರ ಅಧೋಗತಿಯನ್ನು ಕಂಡೂ ಕಾಣದವರಾಗಿದ್ದರು (ರೋಂ ಹೊತ್ತಿ ಉರಿಯುತ್ತಿದ್ದಾಗ ವೀಣೆ ನುಡಿಸುತ್ತಿದ್ದ ರಾಜ ನೀರೋ ಇದಕ್ಕೆ ಸ್ಪಷ್ಟ ಉದಾಹರಣೆ), ಜನಸಾಮಾನ್ಯರು ಏನೇ ಆಗಿರಲಿ ಅವರ ಬಗ್ಗೆ ಚಿಂತಿಸುವ ಜಾಯಮಾನ ಅವರದ್ದಾಗಿರಲಿಲ್ಲ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮುಗಿಲು ಮುಟ್ಟಿದ್ದ ಪರಿಸ್ಥಿತಿ ಅಂದು ನಿರ್ಮಾಣವಾಗಿತ್ತು. ತಮ್ಮ ವಿಲಾಸೀ ಭೋಗ ಜೀವನವು ನಷ್ಟಪಡುವುದನ್ನು ಅವರು ಸುತಾರಾಂ ಇಷ್ಟಪಡುತ್ತಿರಲಿಲ್ಲ. ಆದ್ದರಿಂದ ತಮ್ಮನ್ನು ಪ್ರಶ್ನಿಸುವವರನ್ನು ಅವರು ಸಹಿಸುತ್ತಿರಲಿಲ್ಲ. ಪ್ರಶ್ನಿಸುವವರನ್ನು ರಾಜದ್ರೋಹದ ಆಪಾದನೆ ಹೊರಿಸಿ ಸೆರೆಮನೆಗೆ ತಳ್ಳುವ ಮೂಲಕ ಅವರ ಭಾವನೆ ಮತ್ತು ವಿಚಾರಗಳನ್ನು ಹತ್ತಿಕ್ಕಲು ಹವಣಿಸುತ್ತಿದ್ದರು.
    ಪ್ರಭುತ್ವವು ಕಿರಾತಕರ ಮೂಲಕ ಭಾವನೆ ಮತ್ತು ವಿಚಾರಗಳನ್ನು ಹತ್ತಿಕ್ಕಿದ ಹಲವಾರು ಉದಾಹರಣೆಗಳಿವೆ. ಪುನರುಜ್ಜೀವನ ಕಾಲದಲ್ಲಿ ನಡೆದ ಹಲವಾರು ಘಟನೆಗಳು, ಭಾವನೆ ಮತ್ತು ವಿಚಾರಗಳೂ ಯಾವ ರೀತಿ ದಮನ ಮಾಡಲ್ಪಟ್ಟಿತ್ತು? ಎಂಬುದನ್ನು ಸೂಚಿಸುತ್ತದೆ. ಯುರೋಪ್‍ನಲ್ಲಿ ಜನರ ಭಾವನೆಗಳ ಮೇಲೆ ಅಲ್ಲಿನ ಚರ್ಚುಗಳು ನಿರ್ಬಂಧ ಹೇರಿದ್ದವು. ಬೈಬಲ್‍ನ ಸಿದ್ಧಾಂತಗಳಿಗೆ ವಿರುದ್ಧವಾದ ಸಿದ್ಧಾಂತಗಳನ್ನು ಯಾರಾದರೂ ಪ್ರತಿಪಾದಿಸಿದರೆ (ಗೆಲಿಲಿಯೋ, ಕೊಪರ್ನಿಕಸ್ ಇದಕ್ಕೆ ಉದಾಹರಣೆ) ಆತನನ್ನು ಗಡೀಪಾರುಗೊಳಿಸುವ, ಕ್ರೂರವಾಗಿ ಶಿಕ್ಷಿಸುವ ಹಾಗೂ ಕೊಲ್ಲುವ ಕೃತ್ಯಗಳನ್ನು ಅಲ್ಲಿನ ಚರ್ಚುಗಳು ಮಾಡತೊಡಗಿದ್ದವು. ಅಲ್ಲಿನ ರಾಜರೆಲ್ಲರೂ ಚರ್ಚ್‍ಗಳ ಆಜ್ಞಾನುವರ್ತಿಗಳಾಗಿದ್ದರಿಂದ ಪೋಪ್ ಹಾಗೂ ಧರ್ಮಗುರುಗಳು ಯಾವುದೇ ಅಳುಕಿಲ್ಲದೇ ಜನವಿರೋಧಿ ನೀತಿಗಳನ್ನು ಹಾಗೂ ಧರ್ಮಾಂಧ ನೀತಿಗಳನ್ನು ಜನರ ಮೇಲೆ ಹೇರತೊಡಗಿದ್ದರು. ಪರಿಣಾಮವಾಗಿ ಮಾರ್ಟಿನ್ ಲೂಥರ್‍ನ ನೇತೃತ್ವದಲ್ಲಿ ಅಲ್ಲಿ ಪುನರುಜ್ಜೀವನ ಚಳುವಳಿಗಳು ಆರಂಭವಾಯಿತು ಎನ್ನಬಹುದು. ರಾಜಕೀಯ ಪ್ರಜ್ಞೆ ಬೆಳೆದಂತೆಅಲ್ಲಿನ ಜನರು ಪ್ರಭುತ್ವಗಳ ಮೇಲೆ ರೊಚ್ಚಿಗೆದ್ದರು, 20ನೇ ಶತಮಾನದಲ್ಲಿ ಭಾವನೆ ನತ್ತು ವಿಚಾರಗಳನ್ನು ದಮನ ಮಾಡಿದ ಅನೇಕ ನಿದರ್ಶನಗಳು ನಮ್ಮ ಮುಂದಿದೆ. ಈ ಕಾಲದಲ್ಲಿ ಪತ್ರಿಕೋದ್ಯಮಗಳು ಹಾಗು ಮಾಧ್ಯಮಗಳು ವೇಗವಾಗಿ ಅಭಿವೃದ್ಧಿ ಹೊಂದತೊಡಗಿತ್ತು. ಸರಕಾರಗಳ ಅದಕ್ಷತೆ, ಭ್ರಷ್ಟಾಚಾರ, ಪಕ್ಷಪಾತಗಳು ಬಹುಬೇಗನೇ ಪತ್ರಿಕೆಗಳಲ್ಲಿ ವರದಿಯಾಗತೊಡಗಿತ್ತು. ಸರ್ಕಾರದ ಪರ ವಕಾಲತ್ತು ವಹಿಸುತ್ತಿದ್ದ ಅನೇಕ ಕೂಗುಮಾರಿ ಪತ್ರಿಕೆಗಳೂ ಕೂಡ ಇದ್ದವು. ಮಹಾಯುದ್ದದ ಕಾಲದಲ್ಲಿ ಜರ್ಮನಿ ಹಾಗೂ ಇಟಲಿಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು. ಇಟಲಿಯ ಫ್ಯಾಸಿಸ್ಟ್ ಸರಕಾರವು ಅನೇಕ ವಿಚಾರವಂತರನ್ನು ಹಾಗೂ ಪತ್ರಕರ್ತರನ್ನು ಮುಗಿಸಿತ್ತು. ಜರ್ಮನಿಯಲ್ಲಿ ಹಿಟ್ಲರ್‍ನ ನಾಝಿ ಪಕ್ಷವು ಜನರ ವಾಕ್ ಸ್ವಾತಂತ್ರ್ಯವನ್ನೇ ಕಸಿದುಕೊಂದಿತ್ತು. ಅನೇಕ ವಿಚಾರವಂತರನ್ನು ಅಲ್ಲಿಂದ ಗಡಿಪಾರುಗೊಳಿಸಲಾಯಿತು. ಗೆಸ್ಟಪೊ ಎಂಬ ರಹಸ್ಯ ಸಂಘಟನೆಯ ಮೂಲಕ ಸರಕಾರವನ್ನು ಪ್ರಶ್ನಿಸುವವರನ್ನು ಕೊಲೆಗೈಯ್ಯಲಾಯಿತು. ಶೀತಲ ಯುದ್ಧದ ಸಂದರ್ಭಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯೇ ಇರಲಿಲ್ಲ.
ಕಮ್ಯುನಿಸ್ಟ್ ಸರಕಾರಗಳು ಅಸ್ತಿತ್ವದಲ್ಲಿದ್ದ ರಷ್ಯಾ, ಪೋಲೆಂಡ್, ಯುಗೋಸ್ಲಾವಿಯಾ, ಹಂಗೆರಿ, ರುಮೇನಿಯಾ, ಬಲ್ಗೇರಿಯಾ ಮುಂತಾದ ರಾಷ್ಟ್ರಗಳಲ್ಲಿ ಪತ್ರಿಕೆಗಳು ಹಾಗೂ ಬಾನುಲಿ ಮಾಧ್ಯಮಗಳು ಸರಕಾರಗಳ ವೈಫಲ್ಯಗಳ ಮೇಲೆ ಬೆಳಕು ಚೆಲ್ಲತೊಡಗಿದ್ದವು. ಅಲ್ಲಿನ ಸರಕಾರಗಳು ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿದವು.   ಕರವಸ್ತ್ರ, ಬೆಂಕಿಪೊಟ್ಟಣಗಳ ಮೇಲಿನ ಕಮ್ಯುನಿಸ್ಟ್ ವಿರೋಧಿ ಬರಹ ಹಾಗೂ ಮುದ್ರಣಗಳನ್ನು ವ್ಯವಸ್ಥಿತವಾಗಿ ತಪಾಸಣೆಗೊಳಪಡಿಸಿ ಅವುಗಳ ಕಾರ್ಖಾನೆಗಳನ್ನು ಬರ್ಖಾಸ್ತು ಮಾಡಲಾಯಿತು.  ಸರ್ಕಾರದ ಭದ್ರತೆಯ ದೃಷ್ಟಿಯಿಂದ ಹಾಗೂ ಸರಕಾರದ ಮುಖ್ಯಸ್ಥನ ಗೌರವ ಮತ್ತು ಪ್ರತಿಷ್ಠೆಯ ದೃಷ್ಟಿಯಿಂದ ಮಾಧ್ಯಮಗಳ ಮೇಲೆ ಭಾರೀ ನಿಯಂತ್ರಣ ವಿಧಿಸಲಾಯಿತು. ರಹಸ್ಯವಾಗಿ ಸುದ್ದಿ ಬಿತ್ತರಿಸುತ್ತಿದ್ದ ಪತ್ರಕರ್ತರನ್ನು ಬೆಂಬಿಡದೆ ಕೊಲ್ಲಲಾಯಿತು. ಲೆನಿನ್ ಹಾಗೂ ಸ್ಟಾಲಿನ್ನರ ಉಕ್ಕಿನ ಹಿಡಿತದ ಆಡಳಿತಾವಧಿಯಲ್ಲಿ ಅನೇಕ ಸಾಹಿತಿಗಳನ್ನು ದಮನ ಮಾಡಲಾಗಿತ್ತು. ರಷ್ಯನ್, ಫ್ರೆಂಚ್, ಇಂಗ್ಲಿಷ್ ಭಾಷೆಯಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ನೋಬೆಲ್ ವಿಜೇತ ಸಾಹಿತಿ ಇವಾನ್ ಬುನಿನ್ (ivಚಿಟಿ buಟಿiಟಿ)ನನ್ನು ಊರು ಬಿಡುವಂತೆ ಮಾಡಲಾಯಿತು. ಲೆನಿನ್ನನ ಕಮ್ಯುನಿಸ್ಟ್ ಧೋರಣೆಗಳಿಂದ ಬೇಸತ್ತು ಆತ ತನ್ನ ಕೊನೆ ಕ್ಷಣಗಳನ್ನು ಪ್ಯಾರಿಸ್ನಲ್ಲಿ ಕಳೆಯಬೇಕಾಯಿತು. ಈತನಿಗೆ 1930 ರ ಸಾಹಿತ್ಯ ನೋಬೆಲ್ ಪುರಸ್ಕಾರ ದೊರೆತಾಗ ರಷ್ಯಾ ಅದನ್ನು ಖಂಡಿಸಿತು ಮತ್ತು ನೋಬೆಲ್ ಪ್ರತಿಷ್ಠಾನದ ಮೇಲೆ ಕೆಂಗಣ್ಣು ಬೀರಿತ್ತು. ಆನಾ ಅಕ್ಮಟೋವಾ ಎಂಬ ಮಹಿಳಾ ಸಾಹಿತಿಯು ಸರಕಾರದ ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲಿದಾಗ ಆಕೆಯು ಅನೇಕ ಕಿರುಕುಳಗಳನ್ನೆದುರಿಸಬೇಕಾಯಿತು. ಅದೇ ರೀತಿ ಓರ್ವ ಖ್ಯಾತ ಮಹಿಳಾ ಸಾಹಿತಿಯು ಕಮ್ಯುನಿಸ್ಟರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ರಷ್ಯಾದಲ್ಲಿ ಕೆಜಿಬಿ ಎಂಬ ರಹಸ್ಯ ಪಡೆಯು ಹೀಗೆಯೇ ಅನೇಕರನ್ನು ಮುಗಿಸಿತ್ತು, ಹಾಗೂ ಅನೇಕ ಮಾಧ್ಯಮಗಳ ಮೂಲೋತ್ಪಾಟನೆ ಮಾಡಿತ್ತು.
        ಇಂಗ್ಲೆಂಡ್, ಫ್ರಾನ್ಸ್, ಸ್ಪೈನ್, ಪೋರ್ಚುಗಲ್ ಮತ್ತು ಸ್ವೀಡನ್‍ಗಳಲ್ಲಿ ರಷ್ಯಾದಲ್ಲಿದ್ದಂತಹ ನಿರ್ಬಂಧ ನಿಯಂತ್ರಣಗಳಿರಲಿಲ್ಲ. ತಮ್ಮ ಭಾವನೆ, ಅಭಿಪ್ರಾಯ, ಆಚಾರಗಳನ್ನು ಚರ್ಚಿಸಲು ಹಾಗೂ ಕೊಂಡಾಡಲು ಅಲ್ಲಿ ಮುಕ್ತ ಅವಕಾಶಗಳಿದ್ದವು. ಅಷ್ಟು ಮಾತ್ರವಲ್ಲದೆ, ಕಮ್ಯುನಿಸ್ಟ್ ಮಾಧ್ಯಮಗಳ ಮೇಲೂ ಅಲ್ಲಿನ ಕಮ್ಯುನಿಸ್ಟ್ ವಿರೋಧಿ ಸರಕಾರಗಳು ನಿರ್ಬಂಧ ವಿಧಿಸಿರಲಿಲ್ಲ. ಇನ್ನು ವಿಶ್ವದ ದೊಡ್ಡಣ್ಣ ಅಮೆರಿಕಾವು ಅಭಿಪ್ರಾಯ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಮುಕ್ತ ಸ್ವಾತಂತ್ರ್ಯವನ್ನು ನೀಡಿತ್ತು. ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿಲ್ಲ. ಅದಾಗ್ಯೂ ಅನೇಕ ಕಮ್ಯುನಿಸ್ಟ್ ನಾಯಕರ ಹಾಗೂ ಮಾಧ್ಯಮಗಳ ಮೇಲೆ ದಿಗ್ಬಂಧನವನ್ನು ವಿಧಿಸಿತ್ತು. ಆದರೆ ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಅಧಿಕಾರರೂಢನಾಧ ಮೇಲೆ ಅಲ್ಲಿನ ಮಾಧ್ಯಮಗಳು ಭಯಭೀತಗೊಂಡಿವೆ. ಟ್ರಂಪ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಹಲವಾರು ಪತ್ರಕರ್ತರನ್ನು ಬಂಧಿಸಲಾಗಿದೆ.
        ಆಧುನಿಕ ಜಗತ್ತಿನಲ್ಲಿಯೂ ವಿಚಾರ ಮತ್ತು  ಭಾವನೆಗಳ ಮೇಲೆ ನಿರ್ಬಂಧ ವಿಧಿಸಿದ ಅನೇಕ ದೃಷ್ಟಾಂತಗಳಿವೆ. ಟ್ಯುನೀಷಿಯಾದಲ್ಲಿ ಪ್ರಾರಂಭವಾದ ಅರಬ್ ವಸಂತದ ಕಬಂಧ ಬಾಹುಗಳು ಲಿಬಿಯಾ, ಸಿರಿಯಾ, ಈಜಿಪ್ಟ್‍ನ ಸರ್ವಾಧಿಕಾರಿಗಳನ್ನು ಕಾಡಿದಾಗ ಜಗತ್ತಿನ ಹಲವಾರು ರಾಷ್ಟ್ರಗಳು (ಚೀನಾ ಸೇರಿದಂತೆ) ಮಾದ್ಯಮಗಳು ಹಾಗೂ ಪ್ರಸಾರ ವಾಹಿನಿಗಳ ಮೇಲೆ ಹದ್ದಿನ ಕಣ್ಣುಗಳನ್ನಿಡತೊಡಗಿತು. ಸರ್ವಾಧಿಕಾರಿಗಳೂ ತಮ್ಮ ಪಾರುಪತ್ಯವನ್ನುಳಿಸಿಕೊಳ್ಳಲು ಮಾಧ್ಯಮಗಳ ಮೇಲೆ ದಿಗ್ಬಂಧನ ಹೇರತೊಡಗಿದರು. ಸಿರಿಯಾದ ಬಶರ್ ಅಸದ್ ಹಾಗೂ ಉತ್ತರ ಕೊರಿಯದ ಕ್ರೂರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಮುಂತಾದ ಸರ್ವಾಧಿಕಾರಿಗಳು ವಿಚಾರವಂತರನ್ನು ಹಾಗೂ ಮಾದ್ಯಮಗಳನ್ನು ಹತೋಟಿಗೆ ತರುವ ಪ್ರಯತ್ನಗಳನ್ನು ಮಾಡತೊಡಗಿದರು. ಹತೋಟಿಗೆ ಬಾರದವರನ್ನು ನಿರ್ದಯವಾಗಿ ಕೊಂದರು. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬ್ರಿಟಿಷರು ಇಲ್ಲಿನ ಮಾಧ್ಯಮಗಳನ್ನು ತಹಬಂದಿಗೆ ತರಲು ಪ್ರಯತ್ನಪಟ್ಟಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿಹಿಂದೊಮ್ಮೆ ಇಂದಿರಾ ಗಾಂಧಿ ಆಡಳಿತಕಾಲದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದೀಗ ಈಗಿನ ಸರಕಾರವೂ ಕೂಡಾ ಅಂತಹ ಪ್ರಯತ್ನಗಳನ್ನು ಹಂತಹಂತವಾಗಿ ಮಾಡತೊಡಗಿದೆ. ಆದ್ದರಿಂದ ಪ್ರಜ್ಞಾವಂತರು ಸರಕಾರಗಳ ಇಂತಹ ಧೋರಣೆಗಳನ್ನು ಖಂಡಿಸಬೇಕಾಗಿದೆ. ಒಟ್ಟಿನಲ್ಲಿ ವಿಚಾರ ಮತ್ತು ಭಾವನೆಗಳ ವ್ಯಕ್ತಪಡಿಸುವಿಕೆಯು ಸರಕಾರಗಳ ನಿದ್ದೆಗೆಡಿಸಿದ್ದಂತೂ ಸತ್ಯ.


ಎಪಿಎಂ ಶಮೀರ್ ಪೆರುವಾಜೆ
ಖೈಕಾ ಅಲ್ ಖೈರಿಯ್ಯ
ಹಲಸೂರು, ಬೆಂಗಳೂರು_08

Comments